ಪೋಡೊಸ್ಟಿಮೊನೇಸಿ
ಇದು ರೋಸೇಲೀಸ್ ಗಣಕ್ಕೆ ಸೇರಿದ ಕುಟುಂಬ.  ಈ ಕುಟುಂಬದ ಗಿಡಗಳು ಅತಿ ವಿಚಿತ್ರ ಬಗೆಯವು.  ಇದರಲ್ಲಿ ಸುಮಾರು 43 ಜಾತಿಗಳು 130 ಪ್ರಭೇದಗಳು ಉಂಟು.  ಗಿಡಗಳು ನೀರಿನಲ್ಲಿ ಮುಳುಗಿ ಬೆಳೆಯುತ್ತವೆ.

ರಿಂಕೋಲಾಸಿಸ್, ಮೌರೀರ, ಪೋಡೋಸ್ಟಮೇನ್, ಡೈಕ್ರಿಯ, ಹೈಡ್ರೊಬ್ರೈಯಮ್, ಕಾಸ್ಟೆಲ್‍ನಾವಿಯ, ಟ್ರಸ್ಟಿಕ, ಗ್ರಿಫಿತೆಲ, ವಿಲ್ಲಿಸಿಯ, ಫಾರ್ಮೇರಿಯ ಮುಂತಾದವು ಪ್ರಧಾನ ಜಾತಿಗಳು.  

ಇವು ಸಾಮಾನ್ಯವಾಗಿ ಕಾಣದೊರೆಯುವುದು ಉಷ್ಣವಲಯಗಳಲ್ಲಿ ಮಾತ್ರ.  ಶೀಘ್ರಗಾಮಿ ನದಿಗಳಲ್ಲಿ ಬಂಡೆಗಳಿಗೆ, ಕಲ್ಲುಗಳಿಗೆ ಅಂಟಿಕೊಂಡು ಬೆಳೆಯುತ್ತವೆ.  ನೀರಿನಲ್ಲಿ ಬೆಳೆಯುವ ಮರಗಳು ತೊಗಟೆಯ ಮೇಲೂ ಅಪರೂಪವಾಗಿ ಕಾಣಬಹುದು.  ಇತರ ಹೂ ಬಿಡುವ ಸಸ್ಯಗಳಿರುವಂತೆ ಈ ಕುಟುಂಬದ ಸಸ್ಯಗಳಲ್ಲಿ ನಿರ್ದಿಷ್ಟ ಕಾಂಡ, ಬೇರು, ಎಲೆ ಮುಂತಾದ ಭಾಗಗಳಿರುವುದಿಲ್ಲ.  ಪಾಚಿ ಸಸ್ಯ ಇಲ್ಲವೇ ಬ್ರಯೋಫೈಟ್ ಸಸ್ಯಗಳಿಗಿರುವಂತೆ ಥ್ಯಾಲಸ್ ಎಂಬ ಸಸ್ಯ ದೇಹ ಇರುತ್ತದೆ.  ಇದು ರಭಸವಾಗಿ ಹರಿಯುವ ನೀರಿನಲ್ಲಿ ಬೆಳೆಯುವುದರಿಂದ ಪ್ರವಾಹದಲ್ಲಿ ಕೊಚ್ಚಿ ಹೋಗದಂತೆ ಆಧಾರಕ್ಕೆ ಅಂಟಿಕೊಂಡು ಬೆಳೆಯುವುದಕ್ಕೆ ಸಹಾಯಕವಾಗುವಂತೆ ಹ್ಯಾಪ್ಟಿರಾನ್ ಎಂಬ ಪ್ರತ್ಯೇಕ ಅಂಗ ಭಾಗವನ್ನು ಇವುಗಳಲ್ಲಿ ಕಾಣಬಹುದು.  ಸಸ್ಯ ದೇಹ ಬಂಡೆಗಳ ಮೇಲೆ ಮಲಗಿದಂತೆ ಹರಡಿರುತ್ತದೆ.  ತಳಭಾಗದಲ್ಲಿ ಹ್ಯಾಪ್ಟಿರಾನನ್ನು ರಚಿಸಿಕೊಂಡು ಅದರ ಸಹಾಯದಿಂದ ಆಧಾರವನ್ನು ಬಿಗಿಯಾಗಿ ಅಪ್ಪಿಕೊಂಡಿರುತ್ತವೆ ಕೆಲವು ಜಾತಿಗಳಲ್ಲಿ ಛಿದ್ರವಾಗಿರುವುದುಂಟು.  ಇನ್ನೂ ಕೆಲವಲ್ಲಿ ಹೆಚ್ಚು ಕವಲು ಒಡೆದಿರುವುದುಂಟು.  ಟ್ರಸ್ಟಿಕ ಪೋಡೊಸ್ಟಿಮಾನ್ ಮುಂತಾದುವುಗಳಲ್ಲಿ ದೇಹ ದಾರದಂತಿರುತ್ತದೆ.  ಡೈಕ್ರಿಯ, ಗ್ರಿಫಿತೆಲಗಳಲ್ಲಿ ದೇಹ ಆಧಾರಕ್ಕೆ ಅಂಟಿಕೊಳ್ಳದೆ ತೇಲುತ್ತಿರುತ್ತದೆ.  ಇವುಗಳಲ್ಲಿ ಪಟ್ಟಿಯಾಕಾರದ ಥ್ಯಾಲಸ್ ಇದೆ.  ಹೈಡ್ರೊಫಿಲ್ಲಮ್ ಎಂಬುದರ ದೇಹ ಕಲ್ಲು ಹೂಗಳನ್ನು ಹೋಲುತ್ತದೆ.  ಟ್ರಸ್ಟಿಕ ಗಿಡದಲ್ಲಿ ಸೂಕ್ಷ್ಮವಾದ ತೆಳುವಾದ ಎಲೆಗಳು ಇರುವುವು.  ದಕ್ಷಿಣ ಅಮೆರಿಕದಲ್ಲಿ ಬೆಳೆಯುವ ಮೌರೀರದಲ್ಲಿ ಎಲೆಗಳು ದೊಡ್ಡದಾಗಿರುತ್ತವೆ.  

ಈ ಗಿಡಗಳ ಒಳ ಅಂಗರಚನೆ ಸಹ ವಿಚಿತ್ರ ರೀತಿಯದೇ.  ಅಂಗರಚನೆ ಬಲು ಸರಳ.  ಪ್ಯಾರೆಂಕೈಮ ಅಂಗಾಂಶಗಳಲ್ಲಿ ನಾಳವ್ಯೂಹಗಳೂ ಚದುರಿರುತ್ತವೆ. ನಾಳವ್ಯೂಹಗಳಲ್ಲಿ ನೀರ್ಗೊಳವೆಗಳು ಉಳಿದ ಜಲಸಸ್ಯಗಳಲ್ಲಿರುವಂತೆ ಅತಿ ಕಡಿಮೆ ಪ್ರಮಾಣದಲ್ಲಿರುವುವು.  ಕೋಶಗಳ ಮಧ್ಯೆ ಅವಕಾಶಗಳು ಉಳಿದ ಜಲಸಸ್ಯಗಳಲ್ಲಿ ಸಮೃದ್ಧವಾಗಿರುವಾದರೆ ಈ ಸಸ್ಯಗಳಲ್ಲಿ ಕೋಶಗಳ ನಡುವೆ ಅವಕಾಶವಿರುವುದಿಲ್ಲ.  ಹೊರಮೈಮೇಲೆ ಸಿಲಿಕದಿಂದ ರಚಿತವಾದ ಪದರವಿರುತ್ತದೆ.  ನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಾದಾಗ ಗಿಡಗಳು ಒಣಗದಂತೆ ಇರಲು ಈ ಪದರ ಸಹಾಯ ಮಾಡುತ್ತದೆ.

ಈ ಕುಟುಂಬದ ಗಿಡಗಳ ಹೂಗಳು ದ್ವಿಲಿಂಗಿಗಳು.  ಹೂಗೊಂಚಲು ಅನಿರ್ದಿಷ್ಟ ರೂಪದ್ದು.  ಪುಷ್ಪಪಾತ್ರೆ, ಪುಷ್ಪದಳವೆಂಬ ಭೇದವಿರುವುದಿಲ್ಲ.  ಕೆಲವು ಹೂಗಳಲ್ಲಿ ದಳಗಳಿಗೆ ಬದಲು ಒಂದು ಕವಚ (ಸ್ಟೇದ್) ಇರಬಹುದು. ದಳಗಳು ಕೆಲವು ಪ್ರಭೇದಗಳಲ್ಲಿ ದಾರಗಳಂತಿರುತ್ತವೆ.  ಮೂರು ಕೇಸರಗಳೂ ಒಂದು ಅಂಡಾಶಯವೂ ಉಂಟು.  ಹೂಗಳು ಅತಿ ಸಣ್ಣ ಗಾತ್ರದವು.  ನೀರಿನ ಮಟ್ಟ ಕಡಿಮೆಯಾದಂತೆ ಹೂ ಅರಳುತ್ತವೆ.  ಗಿಡಗಳು ಒಣಗಿ ಹೋಗುವುದರೊಳಗಾಗಿ ಪರಾಗಸ್ಪರ್ಶ, ಬೀಜೋತ್ಪತ್ತಿ ಬೀಜ ಪ್ರಸಾರ ಕ್ರಿಯೆಗಳು ಜರುಗುತ್ತವೆ.  ಬೀಜದ ಹೊರ ಕವಚ ಅಂಟು ಅಂಟಾಗಿರುತ್ತದೆ.  ನೀರಿನಲ್ಲಿ ಓಡಾಡುವ ಹಕ್ಕಿ ಮುಂತಾದವುಗಳ ಕಾಲುಗಳಿಗೆ ಅಂಟಿಕೊಂಡು ಇವು ಪ್ರಸಾರವಾಗುತ್ತವೆ.  					(ಎಂ.ಸಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ